ಕಾವಲುಗಾರನೇ ಖದೀಮ : ಮನೆ ಮಾಲೀಕನ ಕೈ ಕಾಲು ಕಟ್ಟಿ ದರೋಡೆ
ಆನೇಕಲ್: ಮನೆಯ ಕಾವಲುಗಾರನೇ (ಸೆಕ್ಯೂರಿಟಿ ಗಾರ್ಡ್) ಮಾಲೀಕನ ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ತಾಲೂಕಿನ ಸರ್ಜಾಪುರದ ರಾಮರೆಡ್ಡಿ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಮಧುಸೂದನ್ ರೆಡ್ಡಿ ಎಂಬುವವರ ಮನೆಯಲ್ಲಿ ದರೋಡೆ ನಡೆದಿದ್ದು, 30 ಲಕ್ಷ ನಗದು, 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಮಧುಸೂದನ್ ರೆಡ್ಡಿ ಅವರು ರಾತ್ರಿ ವೇಳೆ ಮನೆಯಲ್ಲಿ ಒಂಟಿಯಾಗಿದ್ದಾಗ ಒಳನುಗ್ಗಿದ ಸೆಕ್ಯೂರಿಟಿ ಗಾರ್ಡ್ ರೋಷನ್ ಹಾಗೂ ಆತನ ನಾಲ್ವರು ಸಹಚರರು ಈ ಕೃತ್ಯ ಎಸಗಿದ್ದಾರೆ.
ಮೊದಲ ಮಹಡಿಯ ಹಿಂಬಾಗಿಲು ಮುರಿದು ಒಳ ಹೋದ ದರೋಡೆಕೋರರು, ಮಧುಸೂದನ್ ರೆಡ್ಡಿ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದಷ್ಟೇ ರೋಷನ್ ಹಾಗೂ ಆತನ ಪತ್ನಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದರು.
ಕಳೆದ ಎರಡು ದಿನಗಳ ಹಿಂದೆ ಸಂಪ್ ಕ್ಲೀನ್ ಮಾಡಲು ಬಂದಿದ್ದ ಒಬ್ಬ ಆರೋಪಿಯು ಮನೆಯಲ್ಲಿ ವಿಚಾರಗಳನ್ನು ತಿಳಿದುಕೊಂಡಿದ್ದ. ತಡರಾತ್ರಿಯವರೆಗೆ ಸೆಕ್ಯೂರಿಟಿ ಗಾರ್ಡ್ ವಾಸವಿದ್ದ ಕೊಠಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಬಳಿಕ ಮನೆ ದೋಚಿ ರೋಷನ್ ಹಾಗೂ ಆತನ ಸಹಚರರು ಪರಾರಿಯಾಗಿದ್ದಾರೆ.
ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.