ತೆಲಂಗಾಣ | ಔಷಧ ತಯಾರಿಕಾ ಘಟಕದಲ್ಲಿ ರಿಯಾಕ್ಟರ್ ಸ್ಫೋಟ : ಐವರು ಸಾವು ; ಹಲವರಿಗೆ ಗಾಯ
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಎಸ್‌ಬಿ ಆರ್ಗಾನಿಕ್ಸ್ ಲಿಮಿಟೆಡ್ (ಔಷಧ ತಯಾರಿಕಾ ಘಟಕ) ನಲ್ಲಿ ಬುಧವಾರ ಮೂರು ರಿಯಾಕ್ಟರ್‌ಗಳು ಸ್ಪೋಟಗೊಂಡಿದ್ದು, ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಿಯಾಕ್ಟರ್‌ಗಳು ಸ್ಫೋಟಗೊಂಡ ನಂತರ ಬೆಂಕಿ ಅವಘಡದಲ್ಲಿ ಪ್ಲಾಂಟ್ ಡೈರೆಕ್ಟರ್ ರವಿ ಶರ್ಮಾ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತ ರವಿ ಮತ್ತು ಆರು ಜನ ಕಾರ್ಮಿಕರು ಬಿಹಾರ ಮೂಲದವರು ಎಂದು ಹೇಳಲಾಗಿದೆ.
ಕನಿಷ್ಠ30 ಕಾರ್ಮಿಕರು ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಗಾಯಗೊಂಡಿದ್ದ ಕಾರ್ಮಿಕರು ಸಹಾಯಕ್ಕಾಗಿ ಕಿರುಚಿ, ಅಳಲು ಪ್ರಾರಂಭಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹತ್ನೂರು ಮಂಡಲದ ಚಂದಾಪುರ ಗ್ರಾಮದಲ್ಲಿ ಬೃಹತ್ ಔಷಧ ತಯಾರಿಕಾ ಘಟಕವಿದೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಔಷಧ ಘಟಕದಲ್ಲಿರುವ ಮೂರು ರಿಯಾಕ್ಟರ್‌ಗಳು ಸ್ಪೋಟಗೊಂಡು ಬೆಂಕಿ ಅನಾಹುತ ಸಂಭವಿಸಿದೆ. ಈ ವೇಳೆ, ಸ್ಥಳದಲ್ಲಿ 60 ಕಾರ್ಮಿಕರಲ್ಲಿ ಸುಮಾರು 30 ಮಂದಿ ಫಾರ್ಮಾ ಕಂಪನಿಯ ಮೂರು ರಿಯಾಕ್ಟರ್‌ಗಳ ಬಳಿ ಕೆಲಸ ಮಾಡುತ್ತಿದ್ದರು. ಮೃತ ರವಿ ಅವರು ರಿಯಾಕ್ಟರ್ ಒಂದರಲ್ಲಿ ಔಷಧ ತಯಾರಿಕೆಯ ಬ್ಯಾಚ್ ಅನ್ನು ತೆರವುಗೊಳಿಸಲು ಕೆಲಸಗಾರರ ಮೇಲೆ ನಿಗಾ ಇಡುತ್ತಿದ್ದರು. ರಿಯಾಕ್ಟರ್‌ಗಳು ಒಂದೊಂದಾಗಿ ಸ್ಫೋಟಗೊಳ್ಳುತ್ತಿದ್ದಂತೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ಆವರಣದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಸಂತ್ರಸ್ತರನ್ನು ಗುರುತಿಸಲು ಕಾರ್ಮಿಕರು ಹರಸಾಹಸ ಪಡಬೇಕಾಯಿತು. ಕೆಲವು ಕಾರ್ಮಿಕರು ಕಾರ್ಖಾನೆಯಿಂದ ಓಡಿಹೋದರು. ಆರಂಭದಲ್ಲಿ, ಅಪಘಾತವನ್ನು ಗಮನಿಸಿದ ಸ್ಥಳೀಯರು ಆವರಣಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಅಪರಿಚಿತರೊಬ್ಬರು ಕರೆ ಮಾಡಿ ಮಾಹಿತಿ ನೀಡಿದ ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳದಿಂದ ಮೃತದೇಹಗಳನ್ನು ಹೊರತೆಗೆದು ಸಂಗಾರೆಡ್ಡಿ ಏರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಅಧಿಕಾರಿಗಳ ಪ್ರಕಾರ, ನಿರ್ವಹಣಾ ಉಸ್ತುವಾರಿಗಳಾದ ಪರ್ಲಿ ಸುಬ್ರಹ್ಮಣ್ಯಂ ಮತ್ತು ಸುರೇಶ್ ಪಾಲ್ ಅವರನ್ನು ಇನ್ನೂ ಗುರುತಿಸಬೇಕಾಗಿದೆ.
ಸಂಗಾರೆಡ್ಡಿ ಜಿಲ್ಲಾಧಿಕಾರಿ ವಲ್ಲೂರು ಕ್ರಾಂತಿ ಮಾಧ್ಯಮಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಸಚಿವರಾದ ಕೊಂಡ ಸುರೇಖಾ, ದಾಮೋದರ ರಾಜನರಸಿಂಹ ಭೇಟಿ ನೀಡಿದ್ದಾರೆ. ಬಳಿಕ, ರಾಜನರಸಿಂಹ ಆಸ್ಪತ್ರೆಗೆ ತೆರಳಿ ಸಂತ್ರಸ್ತರು ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಗಾಯಾಳುಗಳಿಗೆ ಸರ್ಕಾರ ಉತ್ತಮ ಚಿಕಿತ್ಸೆ ನೀಡಲಿದೆ ಎಂದರು.
ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಕಾರ್ಮಿಕರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಗಾಯಗೊಂಡ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಿಯಾಕ್ಟರ್‌ಗಳ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ವಿವರಿಸಿದರು.