ಬ್ರೇಕಿಂಗ್ ನ್ಯೂಸ್
ದ್ವೇಷದ RSS ಮತ್ತು ಹುಸಿವೀರ ಸಾವರ್ಕರ್ : 12 ಮಿಥ್ಯೆಗಳು -ಚಿಂತಕ ಶಿವಸುಂದರ್, ಭಾಗ-1

ದ್ವೇಷದ RSS ಮತ್ತು ಹುಸಿವೀರ ಸಾವರ್ಕರ್ : 12 ಮಿಥ್ಯೆಗಳು -ಚಿಂತಕ ಶಿವಸುಂದರ್, ಭಾಗ-1

ಈಜಗತ್ತು ನ್ಯೂಸ್ ಡೆಸ್ಕ್
News desk
October 15, 2025, 10:00 am
RSS ಗೆ ನೂರು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಆರೆಸ್ಸೆಸ್ಸಿನ ಇತಿಹಾಸದ ಮತ್ತು ಅದರ ಸೈದ್ಧಾಂತಿಕ ಪಿತಾಮಹ ಸಾವರ್ಕರ್, ಮತ್ತು ಅದರ ರಾಜಕೀಯ-ಸಂಘಟನಾತ್ಮಕ ಗುರುಗಳಾದ ಹೆಡ್ಗೇವಾರ್ ಮತ್ತು ಗೋಳ್ವಾಲ್ಕರ್ ಅವರುಗಳ ಬಗ್ಗೆ ಇಡೀ ದೇಶಾದ್ಯಂತ ಹಸಿ ಮತ್ತು ವಿಷಭರಿತ ಸುಳ್ಳುಗಳ ಮಹಾ ಅಭಿಯಾನ ನಡೆಯುತ್ತಿದೆ. ಅದರಲ್ಲಿ ಪ್ರಮುಖವಾದ ೧೨ ಸುಳ್ಳುಗಳ ನಿಜ ಹೂರಣವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. 

 ಈ ಸುಳ್ಳುಗಳಿಗೆ ಉತ್ತರವನ್ನು ನೀಡಲು ಆರೆಸ್ಸೆಸ್ ನಾಯಕರು ಮತ್ತು ಸಾವರ್ಕರ್ ಅವರು ಬರೆದಿರುವ ಕೃತಿಗಳನ್ನೇ ಆಧರಿಸಲಾಗಿದೆ. ದಯವಿಟ್ಟು ಹಿಂದೂರಾಷ್ಟ್ರವಾದಿಗಳು ತಮ್ಮದೇ ನಾಯಕರ ಈ ಕೃತಿಗಳನ್ನು ಪ್ರರಾಂಬರಿಸಬೇಕೆಂದೂ ಸಹ ವಿನಂತಿ:

 ಪ್ರಧಾನವಾಗಿ ಸಾವರ್ಕರ್ ಅವರು ಬರೆದಿರುವ :

 1.Essentials of Hindutva 
2. . Six Glorious Epochs Of Indian History 

3. ಸಾವರ್ಕರ್ ಸಮಗ್ರ ವಾಗ್ಮಯದ ಆಯ್ದ ಭಾಗಗಳು.

 ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಬರೆದಿರುವ 

 1. We Or Our Nationhood Defined .

2. Bunch Of Thoughts ಮತ್ತು Organiser ಪತ್ರಿಕೆಯ ನಿರ್ದಿಷ್ಟ ಸಂಚಿಕೆಗಳು

 ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರರ ಬದುಕು ಹಾಗೂ ರಾಜಕೀಯದ ಬಗ್ಗೆ ಆರೆಸ್ಸೆಸ್ ನ ಪ್ರಮುಖ ನಾಯಕರಾದ ಹೂ.ವೆ. ಶೇಷಾದ್ರಿಯವರು ಬರೆದ Dr. Hedgewar- The Epoch Maker, ಸಿಪಿ ಬಿಷ್ಕರ್ ಮತ್ತು ಎನ್‌ಎಚ್ ಪಾಲ್ಕರ್ ಅವರು ಬರೆದ ಹೆಡ್ಗೇವಾರರ ಜೀವನ ಚರಿತ್ರೆಗಳು. 

 ಇದಲ್ಲದೆ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ನಿರ್ದಿಷ್ಟ ಸಂಪುಟಗಳು, ಇತಿಹಾಸಕಾರ ಪ್ರೊ. ಶಂಸುಲ್ ಇಸ್ಲಾಂ ಅವರ ಬರಹಗಳು. ಆರೆಸ್ಸೆಸ್ನ ಅಭಿಮಾನಿ ವಾಲ್ಟರ್ ಆಂಡರ್ಸನ್ ಅವರ Brotherhood In Saffron, ಧನಂಜಯ್ ಕೀರ್ ಅವರ "ಸಾವರ್ಕರ್" ಅವರ ಜೀವನ ಚರಿತ್ರೆ, ಕ್ರಿಸ್ಟೊಫೊ ಜಾಫ಼ರ್ಲೆ ಅವರ Hindu Nationalism ಇನ್ನಿತ್ಯಾದಿ ಗ್ರಂಥಗಳು.

 ಇವೆಲ್ಲವೂ ಸಾರ್ವಜನಿಕವಾಗಿ ಲಭ್ಯವಿದ್ದು ದಯವಿಟ್ಟು ಭಕ್ತರು ಮತ್ತು ಆಸಕ್ತರು ಇವುಗಳನ್ನು ತಾವೇ ನೇರವಾಗಿ ಓದಿ ವಿಶ್ಲೇಷಿಸಿ ಸ್ವಂತ ತೀರ್ಮಾನಕ್ಕೆ ಬರುವುದು ಇನ್ನು ಒಳ್ಳೆಯದು. 

 ಮಿಥ್ಯೆ 1.: ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲವೇ? ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೇವಾರ್ 1920ರಲ್ಲಿ ಮತ್ತು 1930 ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿರಲಿಲ್ಲವೇ? ನಾಗಪುರದಲ್ಲಿ ಕಾಂಗ್ರೆಸ್ ಸಮಾವೇಶ ಸಂಘಟಿಸಿರಲಿಲ್ಲವೇ? ಇವೆಲ್ಲವೂ ಸ್ವಾತಂತ್ರ್ಯ ಹೋರಾಟವಲ್ಲವೇ?

 ಭಾರತ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯಾದದ್ದು ೧೮೮೫ರಲ್ಲಿ. ಭಾರತದ ಸ್ವಾತಂತ್ರ್ಯ ಹೋರಟದ ಇತರ ಧಾರೆಗಳಾದ ಆಜಾದ್ - ಭಗತ್ ಸಿಂಗರ ಹಿಂದೂಸ್ಥಾನ್ ಸೊಷಿಯಲಿಸ್ಟ್ ರಿಪಬ್ಲಿಕ್, ಭಾರತ ಕಮ್ಯುನಿಸ್ಟ್ ಪಕ್ಷ ಇತ್ಯಾದಿಗಳು ಸ್ಥಾಪನೆಯಾದದ್ದು ಆ ನಂತರದಲ್ಲಿ. ಆರೆಸ್ಸೆಸ್ ಸ್ಥಾಪನೆಯಾದದ್ದು ೧೯೨೫ರಲ್ಲಿ. ಹೀಗಾಗಿ ಬಹುಪಾಲು ಎಲ್ಲಾ ಧಾರೆಗಳ ಸ್ವಾತಂತ್ರ್ಯ ಹೋರಾಟಗಾರರೂ ತಮ್ಮ ಸಂಘಟನೆಗಳು ಹುಟ್ಟಿಕೊಳ್ಳುವ ಮುನ್ನ ಪ್ರಾರಂಭದ ದಿನಗಳಲ್ಲಿ ಕಾಂಗ್ರೆಸ್‌ನ ಭಾಗವಾಗಿದ್ದದ್ದು ಸಹಜ. 

 ಹಾಗೆಯೇ ಹೆಡಗೇವಾರರು ೧೯೨೫ರಲ್ಲಿ ಆರೆಸ್ಸೆಸ್ ಸ್ಥಾಪಿಸುವ ಮುನ್ನ ಬಾಲಗಂಗಾಧರ ತಿಲಕರ ಮಾರ್ಗದರ್ಶನದಲ್ಲಿ ನಾಗಪುರದ ಕಾಂಗ್ರೆಸ್ ಅಧಿವೇಶನವನ್ನು ಸಂಘಟಿಸಿದರು. ೧೯೨೦ರಲ್ಲಿ ಅಸಹಕಾರ ಚಳವಳಿಯ ಭಾಗವಾಗಿ ಒಂದೂವರೆ ವರ್ಷ ಸೆರೆವಾಸವನ್ನು ಅನುಭವಿಸಿದ್ದು ನಿಜ. 

 ಆದರೆ ಅಸಹಕಾರ ಚಳವಳಿಯಲ್ಲಿ ಗಾಂಧಿಯವರು ಹಿಂದೂ-ಮುಸ್ಲಿಂ ಐಕ್ಯತೆಯನ್ನು ಚಳವಳಿಯ ಮುಖ್ಯ ಭೂಮಿಕೆಯಾಗಿಸಿದ್ದು ಹೆಡಗೇವಾರರಿಗೆ ಅಪಾರ ಅಸಮಾಧಾನ ಉಂಟುಮಾಡಿತು. ಹಾಗೂ ಸೆರೆವಾಸದಿಂದ ಹೊರಬಂದ ಕೂಡಲೇ ಸ್ವಾತಂತ್ರ್ಯ ಹೋರಾಟಕ್ಕೆ ಪರ್ಯಾಯವಾದ ಹಿಂದೂ ರಾಷ್ಟ್ರ ಚಳವಳಿ ಕಟ್ಟಲು ರತ್ನಗಿರಿಯಲ್ಲಿದ್ದ ಸಾವರ್ಕರ್ ಅವರನ್ನು ಭೇಟಿ ಮಾಡಿ ದೀಕ್ಷೆ ಪಡೆದರು. ಅದರ ಮುಂದುವರೆಕೆಯಾಗಿಯೇ ೧೯೨೫ರಲ್ಲಿ ಆರೆಸ್ಸೆಸ್ ಕಟ್ಟಿದರು. ಅವರು ಕಟ್ಟಿದ ಆರೆಸ್ಸೆಸ್ ನ ಘೋಷಿತ ಉದ್ದೇಶ ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸುವ ಸ್ವಾತಂತ್ಯ ಹೋರಟವಾಗಿರಲೇ ಇಲ್ಲ. ಹೆಡಗೇವಾರರ ಜೀವನ ಚರಿತ್ರೆಯನ್ನು ಬರೆದಿರುವ ಆರೆಸ್ಸೆಸ್ ನಾಯಕ ಹೂ.ವೆ. ಶೇಷಾದ್ರಿಯವರು ತಮ್ಮ Dr. Hedgewar- The Epoch Maker ಪುಸ್ತಕದಲಿ ದಾಖಲಿಸಿರುವಂತೆ :

 "After establishing Sangh, Doctor Saheb in his speeches used to talk only of Hindu organization. Direct comment on Government used to be almost nil.”

 (ಸಂಘವನ್ನು ಸ್ಥಾಪಿಸಿದ ನಂತರ ಅವರು ಕೇವಲ ಹಿಂದೂ ಸಂಘಟನೆಯ ಬಗ್ಗೆ ಮಾತ್ರ ಮಾತಾಡುತ್ತಿದ್ದರು. ಬ್ರಿಟಿಷ್ ಸರ್ಕಾರದ ಬಗ್ಗೆ ಒಂದಿನಿತೂ ಪ್ರಸ್ತಾಪಿಸುತ್ತಿರಲಿಲ್ಲ.) 

 ಅಷ್ಟು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷ್ ವಿರೋಧಿ ಹೋರಾಟವಾಗಿಸಿರುವ ಬಗ್ಗೇ ಖೇದ ವ್ಯಕ್ತಪಡಿಸಿದ್ದರು. 

೧೯೨೯ರಲ್ಲಿ ಕಾಂಗ್ರೆಸ್ ನ ಲಾಹೋರ ಅಧಿವೇಷನ ಸಂಪೂರ್ಣ ಸ್ವಾತಂತ್ರ್ಯದ ಠರಾವನ್ನು ಅನುಮೋದಿಸಿತು. ಅದರ ಭಾಗವಾಗಿ ೧೯೩೦ ರ ಜನವರಿ ೨೬ ರಂದು ದೇಶದೆಲ್ಲೆಡೆ ಕಾಂಗ್ರೆಸ್ ಕರೆಯ ಭಾಗವಾಗಿ ತ್ರಿವರ್ಣ ಧ್ವಜ ಹಾರಿಸಲು ಕರೆ ನೀಡಲಾಗಿತ್ತು. ದಂಡಿ ಸತ್ಯಾಗ್ರಹ ನಡೆದಿತ್ತು. ಆಗ, ಹೆಡಗೇವಾರರು, ಸಿಪಿ ಭಿಶ್ಕರ್ ಹಾಗೂ ಹೂ.ವೆ. ಶೇಷಾದ್ರಿಯವರು ದಾಖಲಿಸಿರುವಂತೆ: 

  " ಯಾವ ಕಾರಣಕ್ಕೂ ಆರೆಸ್ಸೆಸ್ ಈ ಹೋರಾಟದಲ್ಲಿ ಭಾಗವಹಿಸಬಾರದೆಂದೂ, ಜನವರಿ ೨೬ ರಂದು ತ್ರಿವರ್ಣ ಧ್ವಜದ ಬದಲು ಭಗವಾಧ್ವಜವನ್ನು ಹಾರಿಸಬೇಕೆಂದೂ, ಅತಿ ಆಸಕ್ತಿ ಇದ್ದವರು ವೈಯಕ್ತಿಕವಾಗಿ ಬೇಕಿದ್ದರೆ ಚಳವಳಿಯಲ್ಲಿ ಭಾಗವಹಿಸಬಹುದೆಂದು" ಸುತ್ತೋಲೆ ಹೊರಡಿಸಿದರು.

 ಕಾರ್ಯಕರ್ತರ ಅಪಾರ ಒತ್ತಡ ಹಾಗೂ ದೇಶದ ಭಾವನೆಯನ್ನು ಗಮನಿಸಿ ಹೆಡಗೇವಾರರು ತಮ್ಮ ಸರಸಂಘಚಾಲಕ ಹುದ್ದೆಗೆ ತಾತ್ಕಾಲಿಕವಾಗಿ ರಾಜೀನಾಮೆ ನೀಡಿ, ಅದರ ಜವಾಬ್ದಾರಿಯನ್ನು ಪರಂಜಾಪೆ ಎನ್ನುವವರಿಗೆ ವಹಿಸಿ ತಾವು ವೈಯಕ್ತಿಕ ನೆಲೆಯಲ್ಲಿ ದಂಡಿ ಸತ್ಯಾಗ್ರಹದಲ್ಲದೆ ಜಂಗಲ್ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದರು. ಅವರ ಜೀವನ ಚರಿತ್ರೆಕಾರರ ಪ್ರಕಾರ ಅವರು ಜೈಲಿಗೆ ಹೋಗಿದ್ದು ದೇಶಾದ್ಯಂತ ಜೈಲಿಗೆ ಬರುತ್ತಿದ್ದ ಯುವಕರ ಸಂಪರ್ಕ ಪಡೆದುಕೊಂಡು ಹಿಂದೂ ರಾಷ್ಟ್ರ ದ ಉದ್ದೇಶಕ್ಕೆ ಸಂಘಟಿಸುವುದಾಗಿತ್ತು. ಆದ್ದರಿಂದ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದು ಎನ್ನುವುದು ಆರೆಸ್ಸೆಸ್ ನ ಸಂಸ್ಥಾಪಕರ ಆದೇಶವೇ ಆಗಿತ್ತು.

 ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆದಾಗಲಂತೂ ಆರೆಸ್ಸೆಸ್ ನ ಹಿರಿಯ ಸೋದರ ಸಂಘಟನೆಯಾದ ಹಿಂದೂ ಮಹಾ ಸಭಾ ಮತ್ತು ಆರೆಸ್ಸೆಸ್ ನ ಪಿತಾಮಹ ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು ಬ್ರಿಟಿಷ್ ಸರ್ಕಾರ ಸೇರಿಕೊಂಡಿದ್ದರು. ಅದೂ ಮುಸ್ಲಿಂ ಲೀಗ್ ಜೊತೆಗೆ!

 ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಪ್ರಾಣವನ್ನೇ ಬಲಿ ನೀಡಿದ ಆಜಾದ್, ಭಗತ್ ಸಿಂಗರಂಥ ಕ್ರಾಂತಿಕಾರಿಗಳ ಬಗ್ಗೆಯೂ ಆರೆಸ್ಸೆಸ್ ಗೆ ಕೀಳು ಅಭಿಪ್ರಾಯವಿತ್ತು. ಆರೆಸ್ಸೆಸ್ ನ ಎರಡನೇ ಸರ್‌ಸಂಘ ಚಾಲಕ ಗೋಳ್ವಾಲ್ಕರ್ ಅವರು ಆರ್ಗನೈಸರ್ ಪತ್ರಿಕೆಗೆ ಬರೆದ ಲೇಖನದಲ್ಲಿ: 

 " ಭಗತ್ ಸಿಂಗ್ ಇನ್ನಿತ್ಯಾದಿ ಕ್ರಾಂತಿಕಾರಿಗಳದ್ದು ತಪ್ಪು ಆದರ್ಶ. ಅವರಲ್ಲಿ ಲೋಪವಿದ್ದದ್ದರಿಂದಲೇ ಅವರು ಯಶಸ್ವಿಯಾಗಲಿಲ್ಲ. ಅವರು ಭಾರತದ ಯುವಕರಿಗೆ ಮಾರ್ಗದರ್ಶಿಯಲ್ಲ" ಎಂದು ಹೇಳಿದ್ದರು. 

ಹೀಗಾಗಿ ಆರೆಸ್ಸೆಸ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸಿರಲಿಲ್ಲ ಎನ್ನುವುದು ಯಾರೋ ಆರೆಸ್ಸೆಸ್ ವಿರೋಧಿಗಳು ಹೇಳುತ್ತಿರುವ ಸುಳ್ಳುಗಳಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದೆಂಬುದು ಆರೆಸ್ಸೆಸ್ ನ ನಾಯಕರ ಆದೇಶವೇ ಆಗಿತ್ತು.

ಮಿಥ್ಯೆ 2: ಭಾರತ ವಿಭಜನೆಯನ್ನು ಮತ್ತು ದ್ವಿರಾಷ್ಟ್ರ ಸಿದ್ಧಾಂತವನ್ನು ಅಮೂಲಾಗ್ರವಾಗಿ ವಿರೋಧಿಸುತ್ತಿದ್ದ ಏಕೈಕ ಸಂಘಟನೆ RSS ಮತ್ತು ಹಿಂದೂ ಮಹ ಸಭಾ. ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲು ಮಂಡಿಸಿದ್ದು ಅಲಿಘರ್ ವಿಶ್ವವಿದ್ಯಾಲಯದ ಸರ್ ಸಯ್ಯದ್ ಅಹ್ಮದ್ ಖಾನ್. ಅದನ್ನು ಮುಂದುವರೆಸಿದ್ದು ಜಿನ್ನ

 ಸಂಘಪರಿವಾರದವರು ಮಾನ್ಯ ಮಾಡುವ ಪ್ರಖ್ಯಾತ ಇತಿಹಾಸಕಾರ ಆರ್‌ಸಿ ಮಜುಂದಾರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ಹುಟ್ಟಿನ ಬಗ್ಗೆ ಹೀಗೆ ಹೇಳುತ್ತಾರೆ: 

  "ದ್ವಿರಾಷ್ಟ್ರ ಸಿದ್ಧಾಂತದ ಸೃಷ್ಟಿಕರ್ತರು ಬಂಗಾಳ ಪ್ರಾಂತ್ಯದ ನಭಾ ಗೋಪಾಲ್ ಅವರು. ಮುಸ್ಲಿಂ ಲೀಗ್ ಈ ಬಗ್ಗೆ ಪಸ್ತಾಪ ಮಾಡುವ ೫೦ ವರ್ಷಗಳಿಗೆ ಮುಂಚೆ ಅವರು ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಎರಡು ರಾಷ್ಟ್ರಗಳಿವೆ ಎಂದು ಪ್ರತಿಪಾದಿಸಿದ್ದರು" (Majumdar, R. C., Three Phases of India’s Struggle for Freedom ) 

 ಅಂಬೇಡ್ಕರ್ ಅವರು ತಮ್ಮ "ಪಾಕಿಸ್ತಾನ ಅಥವಾ ಭಾರತದ ವಿಭಜನೆಯ ಪ್ರಶ್ನೆ" ಎಂಬ ವಿದ್ವತ್ಪೂರ್ಣ ಬರಹದಲ್ಲಿ ಉಲ್ಲೇಖಿಸುವಂತೆ ಆರ್ಯ ಸಮಾಜದ ಭಾಯಿ ಪರಮಾನಂದ್ ಅವರು ೧೯೦೯ರ ಸುಮಾರಿನಲ್ಲೇ ಹೀಗೆ ಹೇಳುತ್ತಾರೆ: 

 "ಸಿಂಧ್ ಪ್ರಾಂತ್ಯದ ಆಚೆಗಿರುವ ಪ್ರಾಂತ್ಯಗಳನ್ನು ಅಫ಼್ಘಾನಿಸ್ತಾನ ಮತ್ತು ವಾಯುವ್ಯ ಪ್ರಾಂತ್ಯಗಳ ಜೊತೆ ಸೇರಿಸಿ ಮುಸಲ್ಮಾನ ಸಾಮ್ರಾಜ್ಯವನ್ನು ಸ್ಥಾಪಿಸಬೇಕು. ಅಲ್ಲಿರುವ ಹಿಂದೂಗಳು ಇಲ್ಲಿಗೂ, ಇಲ್ಲಿರುವ ಮುಸ್ಲಿಮರು ಅಲ್ಲಿಗೂ ಹೋಗಬೇಕು ಎಂದು ಹೇಳುವ ಮೂಲಕ ಮುಸ್ಲಿಂ ಲೀಗ್, ಜಿನ್ನಾ, ಸಯ್ಯದ್ ಅಹ್ಮದ್ ಖಾನ್ ಅವರಿಗಿಂತಲೂ ಮುಂಚೆಯೇ ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸಿದ್ದರು." ಅಷ್ಟು ಮಾತ್ರವಲ್ಲ. ೧೯೨೪ರಲ್ಲಿ ಆರ್ಯಾ ಸಮಾಜದ ಹಾಗೂ ಹಿಂದೂ ಮಹಾಸಭಾ ಹಿನ್ನೆಲೆಯ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಲಾಲಾ ಲಜಪತ್ ರಾಯ್ ಅವರು ಟ್ರಿಬ್ಯೋನ್ ಪತ್ರಿಕೆಗೆ ೧೯೨೪ರಲ್ಲಿ ಬರೆದ ಲೇಖನದಲ್ಲಿ : 

  "ನನ್ನ ಸಲಹೆ ಏನೆಂದರೆ ಮುಸ್ಲಿಮರು ಹೆಚ್ಚಿರುವ ಪಶ್ಚಿಮ ಪಂಜಾಬನ್ನು ಮುಸ್ಲಿಂ ಆಡಳಿತದ ಪ್ರಾಂತ್ಯವನ್ನಾಗಿಯೂ, ಸಿಕ್ಕರು ಹಾಗೂ ಹಿಂದೂಗಳು ಹೆಚ್ಚಿರುವ ಪೂರ್ವ ಪಂಜಾಬನ್ನು ಹಿಂದೂ ಆಡಳಿತದ ಪ್ರಾಂತ್ಯವನ್ನಾಗಿಯೂ ವಿಭಜಿಸಬೇಕು" ಎಂದು ಬಲವಾಗಿ ಪ್ರತಿಪಾದಿಸಿದ್ದರು. 

 ಹೀಗೆ ದ್ವಿರಾಷ್ಟ್ರ ಸಿಧಾಂತದ ಜನಕರು ಹಿಂದೂರಾಷ್ಟ್ರವಾದಿಗಳೇ ಆಗಿದ್ದಾರೆ. ಹಾಗಿದ್ದಲ್ಲಿ ಸಾವರ್ಕರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ವಿರುದ್ಧವಿದ್ದರೇ? 

 ಇದರ ಬಗ್ಗೆ ೧೯೩೭ರಲ್ಲಿ ಅವರು ಹೀಗೆ ಬರೆಯುತ್ತಾರೆ: 

 "ಭಾರತದ ಒಳಗೆ ಎರಡು ಪರಸ್ಪರ ವಿರುದ್ಧ ರಾಷ್ಟ್ರಗಳಿವೆ. ಕೆಲವು ಬಾಲಿಶ ರಾಜಕಾರಣಿಗಳು ಭಾರತ ಈಗಾಗಲೇ ಒಂದು ರಾಷ್ಟ್ರವಾಗಿದೆ ಎಂದು ಹೇಳುತ್ತಾರೆ. ಆದರೆ ಭಾರತದ ಒಂದು ರಾಷ್ಟ್ರ ಅಲ್ಲವೇ ಅಲ್ಲ. ಬದಲಿಗೆ ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲೀಮ್ ರಾಷ್ಟ್ರವೆಂಬ ಎರಡು ರಾಷ್ಟ್ರಗಳಿವೆ." (ಸಾವರ್ಕರ್ ಸಮಗ್ರ ವಾಗ್ಮಯ, ೬ ನೇ ಸಂಪುಟ, ಪುಟ ೨೯೬) 

 ಇದಾದ ನಂತರ ಜಿನ್ನಾ ೧೯೪೦ರಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಮುಂದಿಟ್ಟಾಗ ಸಾವರ್ಕರ್ ಅವರು : 

 " ಜಿನ್ನಾ ಅವರ ಹೇಳಿಕೆಯ ಜೊತೆ ನನಗೆ ಯಾವುದೇ ತಗಾದೆಯಿಲ್ಲ. ನಾವು ಹಿಂದೂಗಳು ಬೇರೆಯದೇ ಆದ ರಾಷ್ಟ್ರ. ಹಿಂದೂ ಮತ್ತು ಮುಸ್ಲಿಂ ಬೇರೆಬೇರೆ ರಾಷ್ಟ್ರಗಳೇ ಆಗಿದ್ದಾರೆ" ಎನ್ನುತ್ತಾರೆ. 

 ಈ ಬಗ್ಗೆ ಅಂಬೇಡ್ಕರ್ ಅವರು ತಮ್ಮ "ಪಾಕಿಸ್ತಾನ್.. " ಬರಹದಲ್ಲಿ ಹೀಗೆ ಹೇಳುತ್ತಾರೆ: 

 " ವಿಚಿತ್ರವೆಂದರೆ ಭಾರತ ಒಂದು ರಾಷ್ಟ್ರವೋ ಎರಡು ರಾಷ್ಟ್ರವೋ ಎಂಬ ಸಿದ್ಧಾಂತದ ಬಗ್ಗೆ ಸಾವರ್ಕರ್ ಮತ್ತು ಜಿನ್ನಾ ಪರಸ್ಪರ ವಿರುದ್ಧವಾದುದನ್ನು ಹೇಳುತ್ತಿಲ್ಲ. ಬದಲಿಗೆ ಅ ವಿಷಯದಲ್ಲಿ ಅವರಿಬ್ಬರಿಗೂ ಸಂಪುರ್ಣ ಸಹಮತಿ ಇದೆ. ಅವರಿಬ್ಬರೂ ಆ ವಿಷಯದಲ್ಲಿ ಸಮ್ಮತಿ ಇರುವುದು ಮಾತ್ರವಲ್ಲ. ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲಿಂ ರಾಷ್ಟ್ರ ಎಂಬ ಎರಡು ರಾಷ್ಟ್ರಗಳಿವೆ ಎಂದು ಅವರಿಬ್ಬರೂ ಬಲವಾಗಿ ಪ್ರತಿಪಾದಿಸುತ್ತಾರೆ"* ಎಂದು ಬರೆಯುತ್ತಾರೆ. 

 ಈ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಸಾವರ್ಕರ್ ಪರಿಹಾರ ಏನೆಂದರೆ ಭಾರತ ಹಿಂದೂ ರಾಶ್ಟ್ರವಾಗುವುದು. ಮುಸ್ಲಿಮರು ತಮ್ಮ ಪ್ರತ್ಯೇಕ ಅಸ್ಥಿತ್ವವನ್ನೇ ಬಿಟ್ಟುಕೊಟ್ಟು ಹಿಂದೂ ರಾಷ್ಟ್ರದಲ್ಲಿ ಲೀನವಾಗುವುದು. ಆದರೆ ಈ ಹಿಂದೂ ರಾಷ್ಟ್ರ ಮನುಸ್ಮೃತಿಯ ಆಧಾರದಲ್ಲಿ ಬ್ರಾಹ್ಮಣಶಾಹಿ ಪ್ರಜಾತಂತ್ರ ವಿರೋಧಿ ರಾಷ್ಟ್ರ. ಆದ್ದರಿಂದಲೇ ಅಂಬೇಡ್ಕರ್ ಅವರು ಅದೇ ಬರಹದಲ್ಲಿ ; " 

ಭಾರತವು ಹಿಂದೂ ರಾಷ್ಟ್ರವಾಗುವುದೆಂದರೆ ಅದಕ್ಕಿಂತ ಮತ್ತೊಂದು ವಿಪತ್ತು ಮತ್ತೊಂದಿಲ್ಲ"*. ಎಂದು ಅಚ್ಚರಿಸಿದ್ದರು. 

ಮಿಥ್ಯೆ 3: ಅಂಬೆಡ್ಕರ್ ಅವರು "ಪಾಕಿಸ್ತಾನ .." ಬರಹದಲ್ಲಿ ಭಾರತದ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಬೇಕೆಂದು ಹೇಳಿದ್ದರು . ಹಾಗಿದ್ದರೆ ಅವರು ಕೋಮುವಾದಿಯೇ?

 ಇದು ಅಂಬೇಡ್ಕರ್ ಅವರನ್ನು ಕೇಸರೀಕರಿಸುವ ಭಾಗವಾಗಿ ಸಂಘಪರಿವಾರಿಗಳು ಸಂದರ್ಭವಿಲದೆ ಹೆಕ್ಕಿ ತೆಗೆದು ಮಾಡುತ್ತಿರುವ ಅಪಪ್ರಚಾರ.

 ದ್ವಿರಾಷ್ಟ್ರ ಸಿದ್ಧಾಂತದ ಬಗ್ಗೆ ಅಂಬೇಡ್ಕರ್ ಅಭಿಪ್ರಾಯ ಏನಿತ್ತು ಎಂಬ ಬಗ್ಗೆ ಭಾರತೀಯರು ಎಲ್ಲರೂ ಕಡ್ಡಾಯವಾಗಿ ಅವರ "ಪಾಕಿಸ್ತಾನ.. " ಬರಹವನ್ನು ಕೂಲಂಕಷವಾಗಿ ಓದುವುದು ಒಳ್ಳಯದು. 

 ಅದರಲ್ಲಿ ಅವರು ಧರ್ಮಾಧಾರಿತ ರಾಷ್ಟ್ರ ಪರಿಕಲ್ಪನೆಯನ್ನು ಸಾರಾ ಸಗಟು ವಿರೋಧಿಸುತ್ತಾರೆ. ಹೀಗಾಗಿ ಹಿಂದೂ ರಾಶ್ಟ್ರ ಹಾಗೂ ಪಾಕಿಸ್ತಾನ ಎರಡನೂ ಕೂಡ ವಿರೋಧಿಸುತ್ತಾರೆ. ಅದರ ಭಾಗವಾಗಿಯೇ ಇಸ್ಲಾಮ್ ಧರ್ಮದ ಆಚರಣೆಯಲ್ಲಿರುವ ಜಿಗುಟುಗಳನ್ನು ಮತ್ತು ಅಪ್ರಜಾತಾಂತ್ರಿಕವಾದ ಅಂಶಗಳನ್ನು ಕೂಡಾ ವಿರೋಧಿಸುತ್ತಾರೆ. ಹಾಗೆಯೇ ಹಿಂದೂ ಧರ್ಮದ ಹೆಸರಿನಲ್ಲಿರುವ ಆರೆಸ್ಸೆಸ್-ಸಾವರ್ಕರ್ ಪ್ರತಿಪಾದಿಸುವ ಬ್ರಾಹ್ಮಣಶಾಹಿ ಹಿಂದು ರಾಷ್ಟ್ರವನ್ನು ದೇಶಕ್ಕೆ ಒದಗುವ ಮಹಾ ವಿಪತ್ತು ಎಂದು ಎಚ್ಚರಿಸುತ್ತಾರೆ. ಆದರೆ ದೇಶವಿಭಜನೆ ವಾಸ್ತವವೇ ಅಗಿಬಿಟ್ಟರೆ ಹೆಚ್ಚಿನ ಕೋಮು ನರಮೇಧಗಳಾಗದ ರೀತಿ ಅದನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ಅವರ ಕಾಳಜಿಯಾಗಿತ್ತು. 

 ದೇಶವಿಭಜನೆಯ ಬಗ್ಗೆ ಅಂಬೇಡ್ಕರ್ ತಮ್ಮ " ಪಾಕಿಸ್ತಾನ .. " ಬರಹದಲ್ಲಿ ಬಯಸುವ ಪರಿಹಾರ ಇದು :

 “ If Hindu Raj does become a fact, it will, no doubt, be the greatest calamity for this country. No matter what the Hindus say, Hinduism is a menace to liberty, equality and fraternity. On that account it is incompatible with democracy. Hindu Raj must be prevented at any cost. But is Pakistan the true remedy against it ?... Not partition, but the abolition of the Hindu Maha sabha and the Muslim League and the formation of a mixed party of Hindus and Muslims is the only effective way of burying the ghost of Hindu Raj.” (ಹಿಂದೂ ರಾಜ್ ಅಸ್ಥಿತ್ವಕ್ಕೆ ಬರುವುದೆಂದರೆ ದೇಶಕ್ಕೆ ಮಹ ವಿಪತ್ತು ಒದಗಿದಂತೆ. ಹಿಂದೂಗಳು ಏನೇ ಹೇಳಿದರೂ ಹಿಂದೂ ಧರ್ಮವೆಂಬುದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಒಂದು ದೊಡ್ಡ ಆಪತ್ತು. ಹೀಗಾಗಿ ಹಿಂದೂ ಧರ್ಮ ಹಾಗೂ ಪ್ರಜಾತಂತ್ರ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಹೇಗಾದರೂ ಮಾಡಿ ತಡೆಹಿಡಿಯಲೇ ಬೇಕು. ಆದರೆ ಅದಕ್ಕೆ ಪಾಕಿಸ್ತಾನ ಪರಿಹಾರವಲ್ಲ. ದೇಶವಿಭಜನೆ ಪರಿಹಾರವಲ್ಲ. ಬದಲಿಗೆ ಹಿಂದು ಮಹಾ ಸಭಾ ಹಾಗೂ ಮುಸ್ಲಿಮ್ ಲೀಗ್ ಗಳಂಥ ಕೋಮುವಾದಿ ಪಕ್ಷಗಳನ್ನು ರದ್ದುಗೊಳಿಸಿ ಹಿಂದುಗಳು ಹಾಗೂ ಮುಸ್ಲಿಮರಿಬ್ಬರೂ ಇರುವ ಮಿಶ್ರಪಕ್ಶಗಳನ್ನು ಸ್ಥಾಪಿಸುವುದೊಂದೇ ಹಿಂದೂ ರಾಷ್ಟ್ರವೆಂಬ ಭೂತವನ್ನು ಉಚ್ಚಟಿಸಲು ಇರುವ ಏಕೈಕ ಮಾರ್ಗ ) (DR. BABASAHEB AMBEDKAR : WRITINGS AND SPEECHES. VOL 8, p. 358) 

ಮಿಥ್ಯೆ 4- ಗಾಂಧಿ, ಅಂಬೇಡ್ಕರ್ ಆರೆಸ್ಸೆಸ್ ಶಿಬಿರಕ್ಕೆ ಬೇಟಿ ನೀಡಿದ್ದರು. ಸುಭಾಶ್ ಚಂದ್ರ ಬೋಸ್ ದೇಶಬಿಟ್ಟು ಹೋಗುವ ಮುನ್ನ ಹೆಡಗೇವಾರ್ ಅವರನ್ನು ಭೇಟಿ ಮಾಡಿದ್ದರು. ಅವರೆಲ್ಲರೂ ಆರೆಸ್ಸೆಸ್ ಬಗ್ಗೆ ಅಜ್ನಾನಿಗಳಾಗಿದ್ದರೆ?

 ಆರೆಸ್ಸೆಸ್ ಶಿಬಿರಕ್ಕೆ ಅಂಬೇಡ್ಕರ್ ಭೇಟಿಯ ಬಗ್ಗೆ ಆರೆಸ್ಸೆಸ್ ಹಾಗೂ ಅವರ ಪೋಷಿತ ಲೇಖಕರನ್ನು ಬಿಟ್ಟರೆ ಬೇರೆ ಯಾರೂ ಸ್ವತಂತ್ರವಾಗಿ ದಾಖಲಿಸಿಲ್ಲ. ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ೨೨ ಸಂಪುಟಗಳಲ್ಲಿ ೧೫ ನೇ ಸಂಪುಟದಲ್ಲಿ ಮಾತ್ರ ಒಂದೇ ಒಂದು ಬಾರಿ ಆರೆಸ್ಸೆಸ್ ಬಗ್ಗೆ ಅಂಬೇಡ್ಕರ್ ಉಲ್ಲೇಖಿಸಿದ್ದಾರೆ. ಅದೂ ಕೂಡ ಶೆಡ್ಯೂಲ್ಡ್ ಕಾಸ್ಟ್ ಫ಼ೆಡರೇಷನ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಇತರ ಪಕ್ಷಗಳೊಂದಿಗೆ ಹೊಂದಾಣಿಕೆಯ ಪ್ರಶ್ನೆಯ ಬಗ್ಗೆ ಬರೆಯುತ್ತಾ : 

 "ಶೆಡ್ಯೋಲ್ಡ್ ಕಾಸ್ಟ್ ಫ಼ೆಡರೇಶನ್ ಪಕ್ಷ ಯಾವ ಕಾರಣಕ್ಕೂ ಹಿಂದೂ ಮಹಾ ಸಭಾ ಹಾಗೂ ಆರೆಸ್ಸೆಸ್ ನಂಥ ಕೋಮುವಾದಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ" ಎಂದು ದಾಖಲಿಸುತ್ತಾರೆ. 


 ಇನ್ನು ಸುಭಾಷ ಚಂದ್ರ ಬೋಸರು ಅಧುನಿಕ ಸೆಕ್ಯುಲಾರ್ ಪ್ರಜಾತಂತ್ರವಾದಿಯಾಗಿದ್ದರು. ೧೯೩೮ರಲ್ಲಿ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗ ಯಾವ ಕಾರಣಕ್ಕೂ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗಿನಂಥ ಕೋಮುವಾದಿಗಳು ಕಾಂಗ್ರೆಸ್ಸಿನೊಳಗೆ ಇರಬಾರದೆಂದು ಠರಾವು ಪ್ರಸ್ತಾಪಿಸಿದ್ದರು. ಭಾರತವು ಸ್ವತಂತ್ರವಾದ ಮೇಲೆ ಬ್ರಿಟಿಷ್ ಏಜೆಂಟರಾಗಿರುವ ಆರೆಸ್ಸೆಸ್, ಹಿಂದೂ ಮಹಾ ಸಭಾ ಹಾಗೂ ಮುಸ್ಲಿಂ ಲೀಗ್ ಗಳಿಗೆ ಸ್ಥಾನವಿರುವುದಿಲ್ಲ ಎಂದು ಎಚ್ಚರಿಸಿದ್ದರು. 

 ಇದೆಲ್ಲ ಒಂದು ಕಡೆಯಾದರೆ, ಎರಡನೇ ಮಹಾಯುದ್ಧ ನಡೆಯುತ್ತಿದ್ದಾಗ ಬ್ರಿಟಿಷರಿಗೂ, ಜಪಾನ್-ಜರ್ಮನಿಗೂ ಇರುವ ವೈರುಧ್ಯವನ್ನು ಬಳಸಿಕೊಂಡು ಬ್ರಿಟಿಷರನ್ನು ಸೇನಾತ್ಮಕವಾಗಿ ಸೋಲಿಸಲು ಬೋಸರು ಪ್ರಯತ್ನಿಸುತ್ತಿದ್ದರೆ ಸಾವರ್ಕರ್ ಮತ್ತು ಆರೆಸ್ಸೆಸ್ ಬ್ರಿಟಿಷ್ ಸೇನೆಯನ್ನು ಗಟ್ಟಿಗೊಳಿಸಲು ಅಧಿಕೃತಕವಾಗಿ ಸಹಕರಿಸುತ್ತಿದ್ದರು. ಅಂಥಾ ದ್ರೋಹಿಗಳು ಈಗ ಬೋಸರು ತಮ್ಮವರೇ ಎಂದು ಹೇಳುತ್ತಿದ್ದಾರೆ. 
>ಶಿವಸುಂದರ್

ಈ ಕ್ಷಣದ ಸುದ್ದಿ