ಹೈಕೋರ್ಟ್ | ನ್ಯಾಯ ಪೀಠದ ಮುಂದೆ ಕತ್ತು ಕೊಯ್ದುಕೊಂಡ ವ್ಯಕ್ತಿ: ಭದ್ರತಾ ಲೋಪದ ಬಗ್ಗೆ ಅಸಮಾಧಾನ
ಬೆಂಗಳೂರು: ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್ ನಲ್ಲಿ ಬುಧವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ಬ್ಲೇಡ್ ನಿಂದ ತಮ್ಮ ಕತ್ತು ಕೊಯ್ದುಕೊಂಡ ಪ್ರಕರಣ ನಡೆದಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಚ್. ಪಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ ಎಂದಿನಂತೆ ದೈನಂದಿನ ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು.
ಮಧ್ಯಾಹ್ನ 1.15ರ ಸಮಯದಲ್ಲಿ ಕ್ರಮ ಸಂಖ್ಯೆ 26 ರ ಪ್ರಕರಣವನ್ನು ಕೋರ್ಟ್ ಆಫೀಸರ್ ಕೂಗುತ್ತಿದ್ದಂತೆಯೇ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಒಂದಷ್ಟು ಕಡತಗಳೊಂದಿಗೆ ನ್ಯಾಯಪೀಠದ ಮುಂದೆ ಬಂದು ನಿಂತರು. ನೋಡು ನೋಡುತ್ತಿದ್ದಂತೆಯೇ ಆ ವ್ಯಕ್ತಿ ತಾವು ತಂದಿದ್ದ ಹರಿತವಾದ ಆಯುಧದಿಂದ ತಮ್ಮ ಕತ್ತು ಕೊಯ್ದುಕೊಂಡರು.
ತಕ್ಷಣವೇ ಮುಖ್ಯ ನ್ಯಾಯಮೂರ್ತಿಗಳು ಪೊಲೀಸರನ್ನು ಕರೆದು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ವ್ಯಕ್ತಿಯನ್ನು ಹೊರಗೆ ಕರೆದುಕೊಂಡು ಹೋದರು. ಹೆಚ್ಚಿನ ಮಾಹಿತಿ ನಿರೀಕ್ಷಿಸಬೇಕಿದೆ.
ಭದ್ರತೆ ಲೋಪಕ್ಕೆ ಅಸಮಾಧಾನ:
ಈ ವೇಳೆ 'ಹೈಕೋರ್ಟ್ ಒಳ ಪ್ರವೇಶಕ್ಕೆ ಭಾರಿ ಬಿಗಿ ಭದ್ರತೆ ಇದ್ದರೂ ಈ ವ್ಯಕ್ತಿ ಇಂತಹ ಆಯುಧದೊಂದಿಗೆ ಹೇಗೆ ಒಳ ಪ್ರವೇಶಿಸಿದರು ಮತ್ತು ಪೊಲೀಸರು ಏನು ಮಾಡುತ್ತಿದ್ದಾರೆ' ಎಂದು ನ್ಯಾಯಮೂರ್ತಿ ಪ್ರಭಾಕರ ಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.