ಅಮಿತ್ ಶಾ ಸಂಧಾನ ಯಶಸ್ವಿ : ಮುನಿಸು ಮರೆತು ಒಂದಾದ ಮುಖಂಡರು
ಯಲಹಂಕ : ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಧಾನದ ಪರಿಣಾಮ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ನಡುವಿನ ಮುನಿಸು ಅಂತ್ಯವಾಗಿದೆ.
ತಮ್ಮ ಪುತ್ರ ಅಲೋಕ್ ವಿಶ್ವನಾಥ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಡಾ.ಕೆ.ಸುಧಾಕರ್ ವಿರುದ್ಧ ವಿಶ್ವನಾಥ್ ಮುನಿಸಿಕೊಂಡಿದ್ದರು.
ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದ ಬಳಿಕ ಅಮಿತ್ ಶಾ ಅವರು ಇಬ್ಬರೂ ನಾಯಕರಿಗೆ ಒಟ್ಟಾಗಿ ಚುನಾವಣೆ ಎದುರಿಸುವಂತೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ವರಿಷ್ಠರ ಸೂಚನೆಯ ಬಳಿಕ ಬುಧವಾರ ಬೆಳಿಗ್ಗೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಸಿಂಗನಾಯಕನಗಳ್ಳಿ ನಿವಾಸಕ್ಕೆ ಆಗಮಿಸಿದ ಡಾ.ಕೆ.ಸುಧಾಕರ್ ಮಾತುಕತೆ ನಡೆಸಿದರು.
ವಿಶ್ವನಾಥ್ ಅವರ ಮನೆಯಲ್ಲೇ ಉಪಾಹಾರ ಸೇವಿಸಿ ನಾಮಪತ್ರ ಸಲ್ಲಿಕೆಗೆ ಆಗಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು, ದೇವನಹಳ್ಳಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಹಾಗೂ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಜೊತೆಯಲ್ಲಿದ್ದರು.