ಬೆಂಗಳೂರು | ವೈದ್ಯಕೀಯ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ ; ವಸತಿ ನಿಲಯದಲ್ಲಿ ಕುಡಿಯುವ ನೀರಿ ಹಾಗೂ ಸ್ವಚ್ಛತೆಯ ಕೊರತೆ ಆರೋಪಗಳು ಕೇಳಿಬಂದಿವೆ.
ಬೆಂಗಳೂರು ವೈದ್ಯಕೀಯ ಕಾಲೇಜಿನ 47 ವಿದ್ಯಾರ್ಥಿನಿಯರು ಏಕಾಏಕಿ ವಾಂತಿ – ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಎಂಸಿ ಹಾಸ್ಟೆಲ್ನಲ್ಲಿದ್ದ ಬೆಂಗಳೂರಿನ ಮೆಡಿಕಲ್ ಕಾಲೇಜು 47 ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥರಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಈ ಹಾಸ್ಟೆಲ್‌ನಲ್ಲಿ ಸ್ವಚ್ಛತೆಯ ಕೊರತೆ ಇದೆ. ಕುಡಿಯುವ ನೀರು ಸಹ ಯೋಗ್ಯವಾದುದಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ, ವಿದ್ಯಾರ್ಥಿನಿಯರು ಬಾಟೆಲ್ ನೀರು ಖರೀದಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜಾಹೀರಾತು
ಅಸ್ವಸ್ಥಗೊಂಡ 47 ವಿದ್ಯಾರ್ಥಿನಿಯರ ಪೈಕಿ 28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಐವರಿಗೆ ಹೆಚ್ ಬ್ಲಾಕ್ ಹಾಗೂ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
“ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸದ್ಯ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಉತ್ತಮವಾಗಿದೆ. ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ಬಿಎಂಸಿಆರ್‌ಐ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಮಾತನಾಡಿ, “ಕಾಲರಾ ಇರುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ವಾಂತಿ, ಭೇದಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿರುವವರಲ್ಲಿ ಐಸಿಯುನಲ್ಲಿ 4 ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇನ್ನುಳಿದವರಿಗೆ ವೈದ್ಯರು ಎಚ್ ಬ್ಲಾಕ್‌ನಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ವಿದ್ಯಾರ್ಥಿಗಳು ತೀವ್ರತರವಾದ ಹೊಟ್ಟೆ ನೋವಿನಿಂದ (ಅಕ್ಯೂಟ್ ಗಾಸ್ಟ್ರೋ ಎಂಟರ್ಐಟಿಸ್) ಬಳಲುತ್ತಿರುವುದು ಪ್ರಾಥಮಿಕ ಮಾಹಿತಿಯಿಂದ ದೃಢಪಟ್ಟಿದೆ” ಎಂಬ ಮಾಹಿತಿ ಲಭ್ಯವಾಗಿದೆ.
ಒಂದೇ ಹಾಸ್ಟೆಲ್ನ 47 ವಿದ್ಯಾರ್ಥಿನಿಯರು ಅಸ್ವಸ್ಥ ಪ್ರಕರಣ ಬೆನ್ನಲ್ಲೇ ಕಾಲರಾದ ಶಂಕೆ ಹಿನ್ನೆಲೆ ವಿದ್ಯಾರ್ಥಿಗಳ ಮಾದರಿಯನ್ನ ವೈದ್ಯರು ಪರೀಕ್ಷೆಗೆ ಕಳುಹಿಸಿದ್ದಾರೆ. ಏ.7ರಂದು ವಿದ್ಯಾರ್ಥಿನಿಯರ ಪರೀಕ್ಷೆ ವರದಿ ಸಿಗುವ ನಿರೀಕ್ಷೆ ಇದೆ. ಸದ್ಯ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಸ್ಟೇಬಲ್ ಆಗಿದ್ದು, ಏ.6ರಂದು ಐಸಿಯು ವಿದ್ಯಾರ್ಥಿನಿಯರನ್ನು ಬಿಟ್ಟು ಉಳಿದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ, ಬಿಸಿಲ ಬೇಗೆಯಿಂದಾಗಿ ನಗರದಲ್ಲಿ ಹಲವರು ಅನಾರೋಗ್ಯ ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ವಾಂತಿ-ಬೇಧಿಯಿಂದ ಬಳಲುತ್ತಿರುವುದು ಕಾಲರಾ ಶಂಕೆ ಕೂಡ ವ್ಯಕ್ತವಾಗಿದೆ.